ವಿವೇಕ ವಾರ್ತೆ : ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ನಿಯಮ ಉಲ್ಲಂಘಿಸಿ ಕಟ್ಟಡ ನಿರ್ಮಿಸುತ್ತಿರುವ ಕಾರಣಕ್ಕಾಗಿ ಗಣೇಶ್ ಅವರಿಗೆ ಅರಣ್ಯ ಇಲಾಖೆ ನೊಟೀಸ್ ನೀಡಿದೆ.
ಚಾಮರಾಜನಗರ ಜಿಲ್ಲೆಯ ಬಂಡೀಪುರದಲ್ಲಿ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ನಿರ್ಮಾಣ ಮಾಡುತ್ತಿರುವ ಕಟ್ಟಡ ಕಾಮಗಾರಿಗೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಆಕ್ಷೇಪ ವ್ಯಕ್ತಪಡಿಸಿದೆ.
ನಟ ಗಣೇಶ್ ಗುಂಡ್ಲುಪೇಟೆ ತಾಲೂಕಿನ ಹಂಗಳ ಹೋಬಳಿಯ ಜಕ್ಕನಹಳ್ಳಿ ಎಂಬಲ್ಲಿನ ಸರ್ವೆ ನಂಬರ್ 105ರಲ್ಲಿ ಒಂದು ಎಕರೆ 24 ಗುಂಟೆ ಜಮೀನು ಹೊಂದಿದ್ದು, ಇಲ್ಲಿ ಮನೆ ಹಾಗೂ ತೋಟಗಾರಿಕಾ ಉದ್ದೇಶಕ್ಕಾಗಿ ತಾತ್ಕಾಲಿಕ ಕಟ್ಟಡ ನಿರ್ಮಾಣಕ್ಕೆ ಅನುಮತಿ ಪಡೆದುಕೊಂಡಿದ್ದಾರೆ.
ಆದರೆ, ಅರಣ್ಯ ಸೂಕ್ಷ್ಮ ಪರಿಸರ ವಲಯದಲ್ಲಿ ಯಾವುದೇ ಕಟ್ಟಡ ನಿರ್ಮಾಣಕ್ಕೆ ನಿಯಮಾನುಸಾರ ಅವಕಾಶವಿಲ್ಲ ಎಂದು ಪರಿಸರವಾದಿಗಳು ಅರಣ್ಯ ಇಲಾಖೆಗೆ ದೂರು ಸಲ್ಲಿಸಿದ್ದರು.
ಈ ಹಿನ್ನಲೆಯಲ್ಲಿ ಬಂಡೀಪುರ ಹುಲಿಧಾಮ ನಿರ್ದೇಶಕ ಡಾ. ಪಿ ರಮೇಶ್ ಕುಮಾರ್ ನಟ ಗಣೇಶ್ ಅವರಿಗೆ ನೊಟೀಸ್ ಜಾರಿಗೊಳಿಸಿದ್ದಾರೆ. ನೀವು ಕಟ್ಟಡ ನಿರ್ಮಿಸುತ್ತಿರುವ ಸ್ಥಳ ಸೂಕ್ಷ್ಮ ಪರಿಸರ ವಲಯದಲ್ಲಿದ್ದು, ಇಲ್ಲಿ ಕಟ್ಟಡ ನಿರ್ಮಿಸಲು ಯಾವ ಅನುಮತಿ ಪಡೆದುಕೊಂಡಿದ್ದೀರಿ? ಯಾವ ಉದ್ದೇಶಕ್ಕೆ ಕಟ್ಟಡ ನಿರ್ಮಾಣವಾಗುತ್ತಿದೆ ಎನ್ನುವ ವಿವರಣೆಯನ್ನು ನೀಡುವಂತೆಯೂ ಈ ನೊಟೀಸ್ ನಲ್ಲಿ ಸೂಚಿಸಲಾಗಿದೆ ಎಂದು ತಿಳಿದುಬಂದಿದೆ.