ವಿವೇಕ ವಾರ್ತೆ :ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದ ಹೊಸಪೇಟೆಗಲ್ಲಿ ಹೊರವಲಯದ ಕೃಷಿ ಜಮೀನು ಬಳಿಯಲ್ಲಿ ದುರಸ್ತಿ ವೇಳೆ ವಿದ್ಯುತ್ ಪ್ರವಹಿಸಿ ಕಂಬದ ಮೇಲೆ ಖಾಸಗಿ ಎಲೆಕ್ಟ್ರಿಷಿಯನ್ ಸಾವನ್ನಪ್ಪಿದ ಘಟನೆ ಇಂದು (ರವಿವಾರ) ಬೆಳಗ್ಗೆ ನಡೆದಿದೆ.
ಮೃತ ದುರ್ದೈವಿಯನ್ನು ತಾಲೂಕಿನ ದಫೇದರ್‌ಕೋಡಿ ನಿವಾಸಿ ಸಿದ್ದರಾಮ ಕುಪವಾಡೆ (38) ಎಂದು ತಿಳಿದು ಬಂದಿದೆ. ಹೆಸ್ಕಾಂ ಸಿಬ್ಬಂದಿ ಕೆಳಗೆ ನಿಂತು ಸಿದ್ದರಾಮ ಕುಪವಾಡೆ ಅವರನ್ನು ಕಂಬಕ್ಕೆ ಹತ್ತಿಸಿ ದುರಸ್ತಿ ಮಾಡಿಸುತ್ತಿದ್ದಾಗ ಈ ದುರ್ಘಟನೆ ನಡೆದಿದೆ.
ಹೆಸ್ಕಾಂ ಕಚೇರಿಗೆ ವಿದ್ಯುತ್ ತಂತಿಗಳು ಜೋತುಬಿದ್ದ ಹಿನ್ನೆಲೆ ರೈತರು ದೂರು ನೀಡಿದ್ದರು. ಹೀಗಾಗಿ ಸ್ಥಳಕ್ಕೆ ಆಗಮಿಸಿದ ಹೆಸ್ಕಾಂ ಸಿಬ್ಬಂದಿ ತನ್ನ ಜೊತೆ ಸಿದ್ದರಾಮ ಅವರನ್ನೂ ಕರೆದುಕೊಂಡು ಬಂದ್ದಿದ್ದರು. ಸಿಬ್ಬಂದಿ ಕೆಳಗೆ ನಿಂತು ಸಿದ್ದರಾಮ ಅವರನ್ನ ವಿದ್ಯುತ್ ಕಂಬಕ್ಕೆ ಹತ್ತಿಸಿದ್ದರು. ಈ ವೇಳೆ ಏಕಾಏಕಿ ವಿದ್ಯುತ್ ಪ್ರವಹಿಸಿ ಸಿದ್ದರಾಮ ಕಂಬದಲ್ಲೇ ಸಾವನ್ನಪ್ಪಿದ್ದಾರೆ.
ಇನ್ನು ಮೃತ ಸಿದ್ದರಾಮ ಕುಪವಾಡೆ ಹೆಸ್ಕಾಂ ಗುತ್ತಿಗೆ ನೌಕರ ಅಲ್ಲ, ಆತ ಖಾಸಗಿ ವ್ಯಕ್ತಿಯಾಗಿದ್ದಾರೆ ಎಂದು ಹೆಸ್ಕಾಂ ಸೆಕ್ಷನ್ ಆಫೀಸರ್ ರಾಜು ಕುಂಬಾರ ಹೇಳಿದ್ದಾರೆ. ನಮ್ಮ ಇಲಾಖೆಯ ಲೈನ್‌ಮ್ಯಾನ್ ತಾಹೀರ್ ದಫೇದಾರ್ ಆತನನ್ನ ಕರೆದುಕೊಂಡು ಬಂದಿದ್ದ. ವೈರ್ ಲೂಸ್ ಆಗಿದ್ದು ದುರಸ್ತಿ ಕಾರ್ಯ ಮಾಡುವುದಾಗಿ ತಿಳಿಸಿದ್ದ. ಯಾವ್ಯಾವ ಲೈನ್ ಎಲ್‌ಸಿ (ಬಂದ್ ಮಾಡಲು) ಬೇಕು ಅಂತಾ ಕೇಳಿದ್ದೆವು.
ಚಿಕ್ಕೋಡಿ ಗ್ರಾಮೀಣ ಭಾಗದ ಎಲ್‌ಸಿ ತಗೆದುಕೊಂಡಿದ್ದ ಆದ್ರೆ ಪಟ್ಟಣ ವಿಭಾಗದ್ದು ತಗೆದುಕೊಂಡಿರಲಿಲ್ಲ. ಇಂದು ಎಲ್ಲಾ ಲೈನ್ ಬಂದ್ ಇರುತ್ತೆ ಅಂತಾ ಕೆಲಸ ಮಾಡುತ್ತಿದ್ದಾಗ ಈ ದುರ್ಘಟನೆ ನಡೆದಿದೆ ಎಂದು ಎಸ್ಓ ತಿಳಿಸಿದ್ದಾರೆ.
ಸದ್ಯ ವಿದ್ಯುತ್ ಕಂಬದ ಮೇಲೆ ಜೋತಾಡುತ್ತಿದ್ದ ಮೃತದೇಹವನ್ನು ಸಿಬ್ಬಂದಿ ಕೆಳಗಿಳಿಸಿದ್ದಾರೆ.