ವಿವೇಕ ವಾರ್ತೆ : ಅಲಿಪಿರಿ ಪಾದಚಾರಿ ಮಾರ್ಗದಲ್ಲಿ ಶುಕ್ರವಾರ ರಾತ್ರಿ ನಡೆದುಕೊಂಡು ತಿರುಮಲ ತಿಮ್ಮಪ್ಪನ ದೇವಸ್ಥಾನಕ್ಕೆ ತೆರಳುತ್ತಿದ್ದ ಆರು ವರ್ಷದ ಬಾಲಕಿಯನ್ನು ಚಿರತೆಯೊಂದು ಎಳೆದೊಯ್ದು ಕೊಂದು ಹಾಕಿದ ಆಘಾತಕಾರಿ ಘಟನೆ ನಡೆದಿದೆ.
ಲಕ್ಷಿತಾ ಎಂಬ ಬಾಲಕಿ ಶುಕ್ರವಾರ ರಾತ್ರಿ 7:30 ರಿಂದ 8 ಗಂಟೆಯ ನಡುವೆ ತನ್ನ ಹೆತ್ತವರೊಂದಿಗೆ ನಡೆದುಕೊಂಡು ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೋಗುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ನೆಲ್ಲೂರು ಜಿಲ್ಲೆಯ ಕೊವ್ವೂರು ಮಂಡಲದ ಪೋತಿರೆಡ್ಡಿ ಪಾಲೆಂ ನಿವಾಸಿಯಾದ ದಿನೇಶ ಮತ್ತು ಶಶಿಕಲಾ ಎಂಬ ಬಾಲಕಿಯ ಪೋಷಕರು, ಅಲ್ಲಿದ್ದವರು ಆಕೆಗಾಗಿ ಹುಡುಕಾಡಿದರೂ ವ್ಯರ್ಥವಾಯಿತು.
ಘಟನೆಯ ಬಗ್ಗೆ ಮಾಹಿತಿ ಸಿಕ್ಕ ಹಿನ್ನಲೇ ಟಿಟಿಡಿ ವಿಜಿಲೆನ್ಸ್ ಮತ್ತು ಭದ್ರತಾ ಸಿಬ್ಬಂದಿ, ಸ್ಥಳೀಯ ಪೊಲೀಸರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಶೋಧ ಕಾರ್ಯ ಆರಂಭಿಸಿದರು. ನಂತರ ಶನಿವಾರ ಮುಂಜಾನೆ 4 ಗಂಟೆ ಸುಮಾರಿಗೆ ನರಸಿಂಹ ಸ್ವಾಮಿ ದೇವಸ್ಥಾನದ ಬಳಿ ಪಾದಚಾರಿಗಳು ಲಕ್ಷಿತಾ ಶವವನ್ನು ಪತ್ತೆ ಮಾಡಿದ್ದಾರೆ.
ಬಾಲಕಿ ಲಕ್ಷಿತಾ ನಾಪತ್ತೆಯಾದಾಗ ತನ್ನ ಕುಟುಂಬಕ್ಕಿಂತ ಮುಂದೆ ನಡೆದುಕೊಂಡು ಹೋಗುತ್ತಿದ್ದಳು, ಅವಳು ಕಾಣೆಯಾಗಿದ್ದಾಳೆಂದು ತಿಳಿದ ನಂತರ, ಮನೆಯವರು ಹುಡುಕಿದರು. ಆಕೆ ಕಾಣದಿದ್ದಾಗ ತಿರುಮಲ ಪೊಲೀಸರಿಗೆ ದೂರು ನೀಡಿದ್ದರು. ನಂತರ ಹುಡುಗಿಯನ್ನು ಹುಡುಕಲು ಸಾರ್ವಜನಿಕರಿಗೆ ಧ್ವನಿವರ್ಧಕದಲ್ಲಿ ಪ್ರಕಟಣೆ ನೀಡಲಾಯಿತು.
ಪೊಲೀಸರಿಗೆ ಶುಕ್ರವಾರ ರಾತ್ರಿಯಾಗಿದ್ದರಿಂದ ಶೋಧ ಕಾರ್ಯಾಚರಣೆಯನ್ನು ಸರಿಯಾಗಿ ನಡೆಸಲು ಸಾಧ್ಯವಾಗಲಿಲ್ಲ, ಆದರೆ ಶನಿವಾರ ಮುಂಜಾನೆ ಹುಡುಕಾಟ ನಡೆಸಿದಾಗ ತಿರುಮಲಕ್ಕೆ ಹೋಗುವ ಫುಟ್‌ಪಾತ್‌ನಲ್ಲಿ 7ನೇ ಮೈಲಿನಲ್ಲಿ ನರಸಿಂಹ ಸ್ವಾಮಿ ದೇವಸ್ಥಾನದ ಬಳಿ ಬಾಲಕಿಯ ಮೃತದೇಹ ಅರ್ಧ ತಿಂದ ಸ್ಥಿತಿಯಲ್ಲಿ ಪತ್ತೆಯಾಗಿದೆ. ತಕ್ಷಣ ಪೊಲೀಸರು ಸ್ಥಳಕ್ಕಾಗಮಿಸಿದ್ದು, ಬಾಲಕಿಯ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ತಿರುಪತಿ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತು.
ಕುಟುಂಬದವರಿಗಿಂತ ಮುಂದೆ ಒಂಟಿಯಾಗಿ ನಡೆದುಕೊಂಡು ಹೋಗುತ್ತಿದ್ದ ಲಕ್ಷಿತಾಳ ಮೇಲೆ ಏಕಾಏಕಿ ದಾಳಿ ಮಾಡಿದ ಚಿರತೆ ದೂರಕ್ಕೆ ಅವಳನ್ನು ಎಳೆದೊಯ್ದಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಅಲಿಪಿರಿ ಎಂಟ್ರಿ ಪಾಯಿಂಟ್ ಮತ್ತು ಇತರ ಪ್ರದೇಶಗಳಲ್ಲಿನ ಸಿಸಿಟಿವಿ ದೃಶ್ಯಾವಳಿಗಳು ಲಕ್ಷಿತಾ ಅವರ ಕುಟುಂಬಕ್ಕಿಂತ ಮುಂದೆ ಹೋಗುತ್ತಿರುವದನ್ನು ಖಚಿತಪಡಿಸಿದೆ.
ಈ ಘಟನೆಯು ದಟ್ಟ ಅರಣ್ಯಗಳ ಮೂಲಕ ಹಾದುಹೋಗುವ ಅಲಿಪಿರಿ ಪಾದಚಾರಿ ಮಾರ್ಗದ ಸುರಕ್ಷತೆಯ ಬಗ್ಗೆ ಮತ್ತೊಮ್ಮೆ ಆತಂಕವನ್ನು ಉಂಟುಮಾಡಿದೆ. ಈ ವರ್ಷವೇ ತಿರುಮಲದಲ್ಲಿ ಐದು ವರ್ಷದ ಬಾಲಕನ ಮೇಲೆ ಚಿರತೆ ದಾಳಿ ನಡೆಸಿತ್ತು. ಆತನಿಗೆ ಗಾಯಗಳಾಗಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.