ವಿವೇಕವಾರ್ತೆ : ಪೊಲೀಸರು ಜೂಜು ಅಡ್ಡೆ ಮೇಲೆ ದಾಳಿ ಮಾಡಿದ್ದಾಗ, ಪೊಲೀಸರಿಗೆ ಹೆದರಿದ ಯುವಕನೋರ್ವ ತಪ್ಪಿಸಿಕೊಳ್ಳಲು ಅರ್ಕಾವತಿ ನದಿಗೆ ಹಾರಿ ನಾಪತ್ತೆಯಾಗಿದ್ದ ಘಟನೆ ಕನಕಪುರದಲ್ಲಿ ನಡೆದಿದ್ದು, ಇದೀಗ ನಾಪತ್ತೆಯಾದ ಯುವಕ ಇಂದು (ದಿ.12) ಶವವಾಗಿ ಪತ್ತೆಯಾಗಿದ್ದಾನೆ.
ಮೃತ ದುರ್ದೈವಿ ಯುವಕನನ್ನು ಕನಕಪುರದ ತಿಗಳರಹಳ್ಳಿ ಗ್ರಾಮದ ಮರಿಸ್ವಾಮಿ (30) ಮೃತ ವ್ಯಕ್ತಿ ಎಂದು ತಿಳಿದು ಬಂದಿದೆ.
ಇತನು ಜೂಜು ಆಡುತ್ತಿದ್ದ ಜೂಜು ಅಡ್ಡೆ ಮೇಲೆ ಕನಕಪುರ ಗ್ರಾಮಾಂತರ ಠಾಣೆ ಪೊಲೀಸರು ಕಳೆದ ಮೂರು ದಿನಗಳ ಹಿಂದೆ ದಾಳಿ ಮಾಡಿದ್ದರು. ದಾಳಿಗೆ ಹೆದರಿದ ಯುವಕ ಮರಿಸ್ವಾಮಿ ತಪ್ಪಿಸಿಕೊಳ್ಳಲು ನದಿಯಲ್ಲಿ ಧುಮ್ಮಿಕ್ಕಿದ್ದಾನೆ. ಯುವಕ ನದಿಯಲ್ಲಿ ಈಜಿ ತಪ್ಪಿಸಿಕೊಂಡಿದ್ದಾನೆ ಎಂದು ಪೊಲೀಸರು ಮರಳಿ ಬಂದಿದ್ದರು.
ದುರ್ದೈವಶಾತ್ ಮೂರು ದಿನಗಳ ಬಳಿಕ ಮರಿಸ್ವಾಮಿ ಶವ ಅರ್ಕಾವತಿ ನದಿಯಲ್ಲಿ ಪತ್ತೆಯಾಗಿದೆ. ಯುವಕ ಮರಿಸ್ವಾಮಿ ಶವ ಪತ್ತೆಯಾದ ಹಿನ್ನಲೆಯಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಅಲ್ಲದೆ ಟುಂಬಸ್ಥರು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನೆಯ ಹಿನ್ನಲೆಯಲ್ಲಿ ಕನಕಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.