ವಿವೇಕ ವಾರ್ತೆ : ಜಾಯಿಂಟ್ ವೀಲ್ ತಿರುಗುತ್ತಿದ್ದಾಗ ಅಕಸ್ಮಾತ್ ಆಗಿ ಹುಡುಗಿಯೊಬ್ಬಳ ಕೂದಲು ಸಿಕ್ಕಿಹಾಕಿಕೊಂಡ ಘಟನೆ ಗುಜರಾತ್ನ ಖಂಭಾಲಿಯಾದಲ್ಲಿ ನಡೆಯುತ್ತಿರುವ ಲೋಕಮೇಳದಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಇನ್ಸ್ಟಾಗ್ರಾಂನಲ್ಲಿ ವಿಡಿಯೋವನ್ನು @amazingdwarka ಎನ್ನುವ ಖಾತೆಯಲ್ಲಿ ಶೇರ್ ಮಾಡಲಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಇನ್ನೂ ಯುವಕನೊಬ್ಬ ಆಕೆಯ ತಲೆಯನ್ನು ಹಿಡಿದುಕೊಂಡಿದ್ದಾನೆ. ಇನ್ನುಳಿದ ಇಬ್ಬರು ಅವಳ ಕೂದಲನ್ನು ಕತ್ತರಿಸುತ್ತ ಬಿಡಿಸಲು ಪ್ರಯತ್ನಿಸುತ್ತಿದ್ದಾರೆ. ನೂರಾರು ಜನರು ಕೆಳಗೆ ನಿಂತು ಈ ದೃಶ್ಯವನ್ನು ಗಾಬರಿಯಿಂದ ನೋಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.
ಹಂಚಿಕೊಂಡಿದ್ದಾಗಿನಿಂದ ಈ ವಿಡಿಯೋವನ್ನು ಸುಮಾರು 26 ಮಿಲಿಯನ್ ಜನರು ನೋಡಿದ್ದಾರೆ. 7.4 ಲಕ್ಷ ಜನರು ಈ ವಿಡಿಯೋಗೆ ಪ್ರತಿಕ್ರಿಯಿಸಿದ್ದಾರೆ. ಇಂಥ ಆಟಗಳು ನಿಜಕ್ಕೂ ಅಪಾಯಕಾರಿ, ಇಲ್ಲಿ ಯಾವುದೇ ರೀತಿಯ ಸುರಕ್ಷತೆ ಇರುವುದಿಲ್ಲ, ಯಾವಾಗ ಬೇಕಾದರೂ ಏನೂ ಆಗಬಹುದು ಎಂದು ಒಬ್ಬರು ಕಮೆಂಟ್ ಮಾಡಿದರೆ, ಕೆಳಗೆ ನಿಂತು ನೋಡುತ್ತಿರುವ ಜನರನ್ನು ನೋಡುತ್ತಿದ್ದರೆ ಗಾಬರಿಯಾಗುತ್ತಿದೆ ಎಂದಿದ್ಧಾರೆ ಇನ್ನೊಬ್ಬರು.
ಒಬ್ಬರು, ಎಷ್ಟು ಜಾಗರೂಕತೆಯಿಂದ ಇದ್ದರೂ ಸಾಲದು ಇಂಥ ಸಂದರ್ಭಗಳಲ್ಲಿ, ಯಾವಾಗ ಏನಾಗುತ್ತದೆಯೋ ಹೇಳಲಾಗದು ಎಂದು ಆತಂಕ ವ್ಯಕ್ತಪಡಿಸಿದ್ಧಾರೆ. ಸವಾರಿ ಮಾಡುವಾಗ ಕೈಕಾಲುಗಳನ್ನು ಕ್ಯಾಬಿನ್ ಒಳಗಿಟ್ಟುಕೊಳ್ಳಬೇಕು ಎನ್ನುವುದು ಗೊತ್ತಿತ್ತು ಆದರೆ ಇದೀಗ ಕೂದಲನ್ನೂ ಎಂದಿದ್ಧಾರೆ ಕೆಲವರು. ಈ ಆಟ ಆಡುವಾಗ ಎಂದಿಗೂ ಕೂದಲನ್ನು ಬಿಟ್ಟುಕೊಂಡು ಕುಳಿತುಕೊಳ್ಳಬೇಡಿ, ಇದು ಹೊಸ ಅಪಾಯ ಎಂದಿದ್ದಾರೆ ಮತ್ತೊಬ್ಬರು.