ವಿವೇಕವಾರ್ತೆ : ಸೇನಾ ನೇಮಕಾತಿ ಪರೀಕ್ಷೆಯಲ್ಲಿ ಹಲವು ಪ್ರಯತ್ನಗಳ ಹೊರತಾಗಿಯೂ ಸಫಲತೆ ಕಾಣದ ಹಿನ್ನಲೆಯಲ್ಲಿ 24 ವರ್ಷದ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿ ನಿಪ್ಪಾಣಿ ತಾಲೂಕಿನಲ್ಲಿ ಗುರುವಾರ ನಡೆದಿದೆ.
ಮೃತರನ್ನು ನಿಪ್ಪಾಣಿ ತಾಲೂಕಿನ ಹಂಚಿನಾಳ್ ಗ್ರಾಮದ ನಿವಾಸಿ 24 ವರ್ಷದ ಅಪ್ಪಾಸೊ ಶಿವಾಜಿ ಪಾನಡೆ ಎಂದು ಗುರುತಿಸಲಾಗಿದೆ.
ಪಾನಡೆ ಬಾಲ್ಯದಿಂದಲೂ ಸೇನೆಗೆ ಸೇರುವ ಕನಸನ್ನು ಹೊಂದಿದ್ದು, ಅದಕ್ಕಾಗಿ ತಯಾರಿ ನಡೆಸುತ್ತಿದ್ದರು. ಶಿವಾಜಿ ಮಹಾರಾಷ್ಟ್ರದ ಖಾಸಗಿ ಕಾರ್ಖಾನೆಯಲ್ಲಿ ಎರಡು ವರ್ಷಗಳ ಕಾಲ ಕೆಲಸ ಮಾಡಿದರು. ಅದರೊಂದಿಗೆ ಸೈನ್ಯಕ್ಕೆ ಸೇರಲು ಹಲವು ಬಾರಿ ಪ್ರಯತ್ನ ನಡೆಸಿದ್ದರು. ಆದರೆ ಆತನ ಕನಸು ನನಸಾಗದ ಕೊರಗಿನಲ್ಲಿ ಯುವಕ ತನ್ನ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನಿಪ್ಪಾಣಿ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.