ವಿವೇಕ ವಾರ್ತೆ : ಮಹಿಳೆಯೋರ್ವಳು ಕೆಲಸವಿಲ್ಲದೆ ಖಾಲಿಯಿದ್ದ ಗಂಡನಿಗೆ ಬುದ್ಧಿ ಕಲಿಸಲು ಮುಂದಾಗಿದ್ದು, ತನ್ನ ಬಂಗಾರ ಕಳ್ಳತನವಾಗಿದೆ ಎಂದು ನಾಟಕವಾಡಲು ಹೋಗಿ ಪೊಲೀಸರ ಅತಿಥಿಯಾಗಿದ್ದಾಳೆ.
ತನ್ನ ಬಂಗಾರದ ಒಡವೆಗಳನ್ನು ಗೆಳೆಯನಿಂದ ಕಳ್ಳತನ ಮಾಡಿಸಿ ಬಳಿಕ ಕಳ್ಳತನವಾಗಿದೆ ಎಂದು ಪೊಲೀಸ್ ಠಾಣೆಗೆ ದೂರು ನೀಡಿದ್ದಳು. ಆದರೆ ಪೊಲೀಸರ ತನಿಖೆ ವೇಳೆ ಸತ್ಯಾಸತ್ಯತೆ ಬಯಲಾಗಿದೆ. ಪ್ರಕರಣ ಸಂಬಂಧ ಮಹಿಳೆ, ಆಕೆಯ ಸ್ನೇಹಿತ ಧನರಾಜ್, ರಾಕೇಶ್ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆಯ ಹಿನ್ನೆಲೆ :
ಮಹಿಳೆ ಬ್ಯಾಂಕ್‍ನಿಂದ 109 ಗ್ರಾಂ ಚಿನ್ನವನ್ನು ಬಿಡಿಸಿಕೊಂಡು ಗಾಡಿಯ ಡಿಕ್ಕಿಯಲ್ಲಿಟ್ಟಿದ್ದಳು. ಬಳಿಕ ಮಕ್ಕಳನ್ನು ಶಾಲೆಯಿಂದ ಟ್ಯೂಷನ್ಗೆ ಬಿಟ್ಟು ಅತ್ತೆ ಮನೆಗೆಂದು ಹೋಗಿದ್ದಳು. ನಂತರ ಮತ್ತದೇ ಟ್ಯೂಷನ್ ಬಳಿ ಬಂದಿದ್ದಳು. ಈ ವೇಳೆ ಸ್ಕೂಟರ್ ನ ಫುಟ್‍ಮ್ಯಾಟ್ ಬಳಿ ಗಾಡಿ ಕೀ ಇಟ್ಟಿದ್ದಳು. ಇದಾದ ಬಳಿಕ ತನ್ನ ಸ್ನೇಹಿತ ಧನಂಜಯ್ ಎಂಬಾತನಿಗೆ ಕಾಲ್ ಮಾಡಿ ಚಿನ್ನವನ್ನು ಕಳ್ಳತನ ಮಾಡಲು ಹೇಳಿದ್ದಳು. ಆಕೆ ಹೇಳಿದಂತೆ ತನ್ನ ಸ್ನೇಹಿತ ರಾಕೇಶ್ ಮತ್ತು ಧನಂಜಯ್ ಬೈಕ್ ಸಮೇತ ಚಿನ್ನ ತೆಗೆದುಕೊಂಡು ಹೋಗಿದ್ದರು.
ಬಳಿಕ ಮಲ್ಲೇಶ್ವರಂ ಪೊಲೀಸ್ ಠಾಣೆಗೆ ತೆರಳಿದ್ದ ಮಹಿಳೆ ಯಾರೋ ತನ್ನ ಬೈಕ್ ಸಮೇತ ಚಿನ್ನವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆಂದು ದೂರು ನೀಡಿದ್ದಳು. ತನಿಖೆಗಿಳಿದ ಪೊಲೀಸರು ಸಿಸಿಟಿವಿ ಪರಿಶೀಲಿಸಿ ಧನಂಜಯ್ ಹಾಗೂ ರಾಕೇಶ್‍ನನ್ನು ಬಂಧಿಸಿದ್ದರು. ಬಳಿಕ ಅವರನ್ನು ವಿಚಾರಣೆ ನಡೆಸಿದಾಗ ಸತ್ಯ ಬಾಯ್ಬಿಟ್ಟಿದ್ದಾರೆ. ಇದರಿಂದ ಮಹಿಳೆಯ ಅಸಲಿ ಮುಖ ಬಯಲಾಗಿದೆ.
ಬಳಿಕ ಪೊಲೀಸರು ಆರೋಪಿಗಳ ಮೊಬೈಲ್ ಪರಿಶೀಲಿಸಿದಾಗ ಅವರು ದೂರು ನೀಡಿದ್ದ ಮಹಿಳೆ ಜೊತೆಗೆ ಚಾಟಿಂಗ್ ಮಾಡಿರುವುದು ಬಯಲಿಗೆ ಬಂದಿದೆ. ಸದ್ಯ ಸುಳ್ಳು ದೂರು ನೀಡಿದ ಮಹಿಳೆ ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಅವರಿಂದ 109 ಗ್ರಾಂ ಚಿನ್ನ ಮತ್ತು ಕೃತ್ಯಕ್ಕೆ ಬಳಸಿದ್ದ 2 ಬೈಕ್‍ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ನನ್ನ ಗಂಡ ಕೆಲಸಕ್ಕೆ ಹೋಗಲ್ಲ. ಮನೆಲ್ಲಿರುವ ಚಿನ್ನ ಕಳ್ಳತನ ಆದ್ರೆ ಪತಿ ಕೆಲಸಕ್ಕೆ ಹೋಗುತ್ತಾನೆಂದು ನಾನು ಈ ಪ್ಲ್ಯಾನ್ ಮಾಡಿದ್ದೆ ಅಂತಾ ಮಹಿಳೆ ಪೊಲೀಸರಿಗೆ ಹೇಳಿದ್ದಾಳೆ. ಇದೀಗ ಅವಳದ್ದೇ ಚಿನ್ನವಾಗಿರೋದ್ರಿಂದ ಕಾನೂನು ಸಲಹೆ ತೆಗೆದುಕೊಳ್ಳಲು ಪೊಲೀಸರು ಮುಂದಾಗಿದ್ದಾರೆ. ಈ ಬಗ್ಗೆ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.