ವಿವೇಕವಾರ್ತೆ : ಕುಡಿತದ ಅಮಲಿನಲ್ಲಿ ತಂದೆಯೇ ಮಗನ ಪ್ರಾಣ ತೆಗೆದಿರುವ ಆಘಾತಕಾರಿ ಪ್ರಕರಣ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆಗೈದ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ.ಅಂದ ಹಾಗೆ ಈ ಘಟನೆ ರಾಜಸ್ಥಾನದ ಕೋಟಾದ ಬುಂದಿ ಜಿಲ್ಲೆಯ ಲಖೇರಿಯಲ್ಲಿ ನಡೆದಿದ್ದು, ತಂದೆ ಮತ್ತು ಮಗ ಒಟ್ಟಿಗೆ ಕುಡಿಯಲು ಕುಳಿತಿದ್ದರು, ನಂತರ ಅವರಿಬ್ಬರ ನಡುವೆ ಯಾವುದೋ ಕ್ಷುಲ್ಲಕ ಕಾರಣಕ್ಕೆ ಜಗಳ ಶುರುವಾಗಿದೆ.
ಆ ಜಗಳ ತಾರಕಕ್ಕೇರಿ ತಂದೆ ಮಗನ ಆಯುಧಗಳಿಂದ ಇರಿದು ಸಾಯಿಸಿದ್ದಾನೆ. ಮರಣೋತ್ತರ ಪರೀಕ್ಷೆಯ ವರದಿಯ ನಂತರ ತಂದೆಯೇ ಕೊಲೆಗೈದಿರುವ ಬಗ್ಗೆ ಪೊಲೀಸರಿಗೆ ಅನುಮಾನ ವ್ಯಕ್ತವಾಗಿದ್ದು, ಕೊಲೆ ಪ್ರಕರಣ ದಾಖಲಿಸಿ ವಿಚಾರಿಸಿದ ನಂತರ ವಿಷಯ ಬೆಳಕಿಗೆ ಬಂದಿದೆ.
ನಯಾಪುರ್ ಪ್ರದೇಶದ ರಾಮದೇವ ಮಂದಿರ ಪ್ರದೇಶದ ನಿವಾಸಿ ಅಭಿಷೇಕ್ ಆಗಸ್ಟ್ 9 ರಂದು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು. ಬದುಕಿರಬಹುದು ಎಂಬ ಅನುಮಾನದಿಂದ ಅಭಿಷೇಕ್‌ನನ್ನು ಸಂಬಂಧಿಕರು ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ನಂತರ ಅಭಿಷೇಕ್ ಅಪಘಾತದಲ್ಲಿ ಮೃತಪಟ್ಟಿದ್ದು, ಮೃತದೇಹವನ್ನು ಮನೆಗೆ ತೆಗೆದುಕೊಂಡು ಹೋಗಿದ್ದಾರೆ ಎಂದು ಸಂಬಂಧಿಕರು ಇತರರಿಗೆ ತಿಳಿಸಿದ್ದಾರೆ. ಆದರೆ ವೈದ್ಯರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ತಿಳಿಸಿದ್ದು, ಯುವಕ ಮೃತಪಟ್ಟಿರುವ ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದಾಗ ಪ್ರಕರಣ ಅನುಮಾನಾಸ್ಪದವಾಗಿ ಕಂಡು ಬಂದ ಹಿನ್ನೆಲೆ ಪೊಲೀಸರು ಅಭಿಷೇಕ್ ಶವವನ್ನು ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದಾರೆ. ತನಿಖೆ ವೇಳೆ ಹಲ್ಲೆ ನಡೆಸಿ ಕೊಲೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ನಂತರ ಮೃತ ಅಭಿಷೇಕ್‌ನ ಪತ್ನಿ ಕೂಡ ತನ್ನ ಪತಿಯ ಸಾವಿನ ಬಗ್ಗೆ ತನಿಖೆ ನಡೆಸುವಂತೆ ಪೊಲೀಸರಿಗೆ ದೂರು ನೀಡಿದ್ದಾರೆ.
ಪೊಲೀಸರು ಅಭಿಷೇಕ್‌ನ ಪತ್ನಿಯನ್ನು ವಿಚಾರಿಸಿದಾಗ, ಪತಿ ಅಭಿಷೇಕ್, ಮಾವ ರಾಜೇಶ್ ಕುಮಾರ್ ಮತ್ತು ಇನ್ನೊಬ್ಬ ಸಂಬಂಧಿ ಖೇಮಚಂದ್ ಎಂಬಾತ ಸೇರಿ ಮನೆಯಲ್ಲಿ ಪಾರ್ಟಿ ಮಾಡಿದ್ದಾರೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಈ ಅಂಶಗಳನ್ನು ಹಿಡಿದುಕೊಂಡ ಪೊಲೀಸರು ಅಭಿಷೇಕ್ ತಂದೆ ರಾಜೇಶ್ ಕುಮಾರ್‌ನನ್ನು ವಿಚಾರಣೆ ನಡೆಸಿದ್ದಾರೆ. ಆಗ ಆತ ಕೊಲೆ ಮಾಡಿರೋದಾಗಿ ಒಪ್ಪಿಕೊಂಡಿದ್ದಾನೆ.
ಪಾರ್ಟಿ ಆದ ಬಳಿಕ ರಾತ್ರಿ ಊಟ ಮುಗಿಸಿ ಸಂಬಂಧಿಕರು ಮನೆಗೆ ತೆರಳಿದ್ದರು. ಆಗ ಅಭಿಷೇಕ್ ಹಾಗೂ ನನ್ನ ನಡುವೆ ವಾಗ್ವಾದ ನಡೆದಿದೆ. ಕುಡಿದ ಅಮಲಿನಲ್ಲಿದ್ದ ನಾನು ಅಭಿಷೇಕ್ ಗೆ ಥಳಿಸಿದ ಪರಿಣಾಮ ಅಭಿಷೇಕ್ ಸಾವನ್ನಪ್ಪಿದ್ದಾನೆ ಎಂದು ಪೊಲೀಸರಿಗೆ ಹೇಳಿದ್ದಾನೆ. ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಅಭಿಷೇಕ್ ತಲೆ ಮತ್ತು ಎದೆಗೆ ಹರಿತವಾದ ಆಯುಧದಿಂದ ಇರಿದಿರುವುದು ಬೆಳಕಿಗೆ ಬಂದಿದ್ದು, ನಂತರ ಪೊಲೀಸರು ತಂದೆಯನ್ನು ಬಂಧಿಸಿದ್ದಾರೆ.