ವಿವೇಕ ವಾರ್ತೆ : ಆರೋಗ್ಯ ಸರಿ ಇಲ್ಲ ಎಂದು ರಜೆ ಪಡೆದು, ಪಬ್ಗೆ ಹೋಗಿ ಕಂಠಪೂರ್ತಿ ಕುಡಿದು, ಪೊಲೀಸ್ ಅಧಿಕಾರಿಯೊಬ್ಬರು ಯುವತಿಗೆ ಲೈಂಗಿಕ ಕಿರುಕುಳ ನೀಡಿರುವ ಪ್ರಕರಣ ಗೋವಾದಲ್ಲಿ ನಡೆದಿದೆ.
ಎ ಕೋನ್ ಎಂದು ಗುರುತಿಸಲ್ಪಟ್ಟ ಡಿಐಜಿ ಈ ಹಿಂದೆ ದೆಹಲಿ ಪೊಲೀಸ್ ಇಲಾಖೆಯಲ್ಲಿ ಉನ್ನತ ಹುದ್ದೆಯಲ್ಲಿದ್ದರು ಎಂದು ವರದಿಯಾಗಿದೆ. ಇವರು ಬಾಗಾ ಪಟ್ಟಣದ ಪಬ್ನಲ್ಲಿ ಡಿಐಜಿ ಕುಡಿದ ಅಮಲಿನಲ್ಲಿ ಯುವತಿಗೆ ಕಿರುಕುಳ ನೀಡಿದ್ದಾರೆ ಎಂದು ದೂರು ನೀಡಲಾಗಿದೆ.
ಘಟನೆಯ ಸಮಯದಲ್ಲಿ ಕೋನ್ ಕುಡಿದ ಅಮಲಿನಲ್ಲಿದ್ದರು. ಅವರು ಕ್ಲಬ್‌ನಲ್ಲಿ ಯುವತಿಯೊಂದಿಗೆ ಜಗಳವಾಡಿದರು. ಅಲ್ಲದೇ ಆಕೆಯೊಂದಿಗೆ ಅನುಚಿತವಾಗಿ ವರ್ತಿಸಿದರು ಎಂದು ವರದಿಯಾಗಿದೆ.
ಘಟನೆಯ ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಡಿಐಜಿ ಮತ್ತು ಮಹಿಳೆ ಜತೆ ಮಾತಿನ ಚಕಮಕಿಯಲ್ಲಿ ತೊಡಗಿರುವುದನ್ನು ಕಾಣಬಹುದು. ಮಹಿಳೆ ಪೊಲೀಸರಿಗೆ ಕಪಾಳಮೋಕ್ಷ ಮಾಡಿದ ಬಳಿಕ ಗಲಾಟೆ ನಡೆದಿದೆ. ಪ್ರಕರಣದ ತನಿಖೆಯಿಂದ ಡಿಐಜಿ ಅವರು ಘಟನೆಯ ಸಮಯದಲ್ಲಿ ವೈದ್ಯಕೀಯ ರಜೆಯಲ್ಲಿದ್ದರು ಎಂದು ತಿಳಿದುಬಂದಿದೆ.
ಘಟನೆಯನ್ನು ಗಮನಿಸಿದ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ಅಧಿಕಾರಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಗೋವಾ ವಿಧಾನಸಭೆಯಲ್ಲೂ ಈ ವಿಷಯವನ್ನು ಕೈಗೆತ್ತಿಕೊಂಡಿದ್ದು, ಪೊಲೀಸ್ ಅಧಿಕಾರಿಯನ್ನು ಸಸ್ಪೆಂಡ್ ಮಾಡಬೇಕೆಂದು ಬೇಡಿಕೆ ಇಡಲಾಗಿದೆ ಎಂದು ವರದಿಯಿಂದ ತಿಳಿದುಬಂದಿದೆ.