ವಿವೇಕ ವಾರ್ತೆ : ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಬಿ.ಜಿ ನಗರದಲ್ಲಿರುವಂತ ಡಿಪ್ಲೋಮಾ ಕಾಲೇಜಿನಲ್ಲಿನ ವಿದ್ಯಾರ್ಥಿಯೊಬ್ಬರ ಬಗ್ಗೆ ಪೋಷಕರಿಗೆ ದೂರು ಹೇಳಿದ್ದಕ್ಕೆ ಉಪನ್ಯಾಸಕರಿಗೆ ಮಚ್ಚು ತೋರಿಸಿ ಅವಾಜ್ ಹಾಕಿರುವ ಘಟನೆ ನಡೆದಿದೆ.
ಡಿಪ್ಲೋಮಾ ಕಾಲೇಜಿನ ವಿದ್ಯಾರ್ಥಿ ಉದಯ್ ಗೌಡ (18) ಕ್ಲಾಸಿಗೆ ಸರಿಯಾಗಿ ಬರುತ್ತಿರಲಿಲ್ಲ.
ಈ ಕಾರಣದಿಂದಾಗಿ ಕಾಲೇಜಿನ ಉಪನ್ಯಾಸಕ ಚಂದನ್, ಉದಯ್ ಪೋಷಕರಿಗೆ ಮಗನ ಬಗ್ಗೆ ದೂರು ಹೇಳಿದ್ದರು. ಅಲ್ಲದೇ ವಿದ್ಯಾರ್ಥಿಗೆ ಸರಿಯಾಗಿ ತರಗತಿಗೆ ಹಾಜರಾಗುವಂತೆ ಎಚ್ಚರಿಕೆ ನೀಡಿದ್ದರು.
ಇದರಿಂದ ಸಿಟ್ಟಾದ ಉದಯ್ ಗೌಡ, ಕಾಲೇಜಿಗೆ ಲಾಂಗ್ ಹಿಡಿದು ಬಂದಿದ್ದಾರೆ. ಅಲ್ಲದೇ ಉಪನ್ಯಾಸಕ ಚಂದನ್ ಗೆ ಅವಾಜ್ ಹಾಕಿ ಬೆದರಿಕೆ ಹಾಕಿದ್ದಾರೆ. ಈತನ ವರ್ತನೆಯನ್ನು ವಿದ್ಯಾರ್ಥಿಗಳು, ಉಪನ್ಯಾಸಕರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.
ಈ ಘಟನೆಯಿಂದಾಗಿ ಉಪನ್ಯಾಸಕ ಚಂದನ್, ಉದಯ್ ಗೌಡ ವಿರುದ್ಧ ಬೆಳ್ಳೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪರಿಸ್ಥಿತಿ ಗಂಭೀರತೆಯನ್ನು ಅರಿತ ಪೋಷಕರು, ಉದಯ್ ಗೌಡ ಜೊತೆಗೆ ಕಾಲೇಜಿಗೆ ಬಂದು ಉಪನ್ಯಾಸಕ ಚಂದನ್ ಅವರ ಕ್ಷಮೆ ಕೇಳಿದ್ದಾರೆ. ಅಲ್ಲದೇ ಮಗನಿಗೆ ಬುದ್ಧಿವಾದ ಹೇಳಿ, ಹೀಗೆ ಮಾಡದಂತೆ ತಿಳಿಹೇಳಿದ್ದಾರೆ ಎನ್ನಲಾಗಿದೆ.