ಇಬ್ಬರು ಮಹಿಳೆಯರನ್ನು (Women) ಸಲಿಂಗಕಾಮಿಗಳು (Lesbian) ಎಂದು ಶಂಕಿಸಿ, ಮೂವರು ಪರುಷರ ಗುಂಪು ಅವರಿಬ್ಬರ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿ, ಬಿಸಿ ಕಬ್ಬಿಣದ ರಾಡ್‌ನಿಂದ ಖಾಸಗಿ ಭಾಗವನ್ನು ಸುಟ್ಟಿರುವ ಆಘಾತಕಾರಿ ಘಟನೆ ಪಶ್ಚಿಮ ಬಂಗಾಳದ (West Bengal) ಮುರ್ಷಿದಾಬಾದ್ ಪ್ರದೇಶದಲ್ಲಿ ನಡೆದಿರುವುದಾಗಿ ವರದಿಯಾಗಿದೆ.
ಆಘಾತಕಾರಿ ಘಟನೆ ಅಕ್ಟೋಬರ್ 25ರಂದು ಜಿಲ್ಲೆಯ ಸಾಗರ್ದಿಘಿ ಗ್ರಾಮದಲ್ಲಿ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಸಂತ್ರಸ್ತ ಮಹಿಳೆಯರನ್ನು ಪುರುಷರು ಲೈಂಗಿಕ ಪ್ರವೃತ್ತಿಗಾಗಿ ಥಳಿಸಿದ್ದಾರೆ ಎಂದು ತಿಳಿದುಬಂದಿದೆ.
ಇಬ್ಬರು ಮಹಿಳೆಯರು ಮಲಗಿದ್ದ ಸಂದರ್ಭ ಆರೋಪಿಗಳು ಕೊಠಡಿಯ ಬಾಗಿಲು ಒಡೆದು ಬಂದಿದ್ದಾರೆ. ಇಬ್ಬರು ಮಹಿಳೆಯರು ಒಂದೇ ಬೆಡ್‌ನಲ್ಲಿ ಮಲಗಿದ್ದಕ್ಕೆ ಅವರಿಬ್ಬರು ಸಲಿಂಗಕಾಮಿಗಳು ಎಂದು ಆರೋಪಿಸಿ ಅವರಿಬ್ಬರ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದ್ದಾರೆ.
ಮೂವರು ಪುರುಷರು ಇಬ್ಬರು ಮಹಿಳೆಯರ ಮೇಲೆ ಅತ್ಯಾಚಾರ ಎಸಗಲು ಪ್ರಯತ್ನಿಸಿದ್ದಾರೆ. ಆದರೆ ಇಬ್ಬರು ಸಂತ್ರಸ್ತೆಯರು ಸ್ಥಳದಿಂದ ತಪ್ಪಿಸಿಕೊಂಡು ಹೋಗಿ, ಹೊಲದಲ್ಲಿ ಅಡಗಿ ಕೂತಿದ್ದಾರೆ. ಇಬ್ಬರ ಮೇಲೆ ಬೆಂಕಿ ಕಡ್ಡಿ ಹಾಗೂ ಮದ್ಯದ ಬಾಟಲಿಗಳಿಂದಲೂ ಹಲ್ಲೆ ನಡೆಸಿರುವುದಾಗಿ ಆರೋಪಿಸಿದ್ದಾರೆ.
ಘಟನೆಯ ಬಗ್ಗೆ ಸಂತ್ರಸ್ತ ಮಹಿಳೆಯರು ನವೆಂಬರ್ 3 ರಂದು ಪೊಲೀಸರಿಗೆ ದೂರು ನೀಡಿದ್ದಾರೆ. ಒಬ್ಬ ಮಹಿಳೆ ಮತ್ತೊಬ್ಬಳೊಂದಿಗೆ ಸಂಬಂಧ ಇದ್ದುದಾಗಿಯೂ ಒಪ್ಪಿಕೊಂಡಿದ್ದಾರೆ. ಆರೋಪಿಗಳಲ್ಲೊಬ್ಬ ಸಂತ್ರಸ್ತೆಯೊಬ್ಬರ ಸಂಬಂಧಿಯೂ ಇದ್ದ ಎಂದು ಮಹಿಳೆಯರು ದೂರು ನೀಡಿದ್ದಾರೆ.ಘಟನೆಗೆ ಸಂಬಂಧಿಸಿದಂತೆ ಒಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಇನ್ನಿಬ್ಬರ ಬಂಧನಕ್ಕೆ ಶೋಧ ನಡೆಸುತ್ತಿದ್ದಾರೆ.