ವಿವೇಕ ವಾರ್ತೆ : ಬಿಜೆಪಿ ಪಕ್ಷದ ಹಿರಿಯ ರಾಜಕಾರಣಿಯ ಜೊತೆಗಿದ್ದ ಕೆಲವು ಆತ್ಮೀಯ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಹಿನ್ನೆಲೆಯಲ್ಲಿ ಅಸ್ಸಾಂನ ಬಿಜೆಪಿ ನಾಯಕಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಮೃತರನ್ನು ರಾಜ್ಯ ಬಿಜೆಪಿಯ ಪ್ರಮುಖ ಸದಸ್ಯೆ ಇಂದ್ರಾಣಿ ತಹಬಿಲ್ದಾರ್ ಎಂದು ಗುರುತಿಸಲಾಗಿದೆ. ತಹಬಿಲ್ದಾರ್ ಚೇಂಬರ್ ಆಫ್ ಕಾಮರ್ಸ್‌ನ ಉಪಾಧ್ಯಕ್ಷ ಸ್ಥಾನವನ್ನು ಹೊಂದಿದ್ದರು.
ಗುವಾಹಟಿಯ ಬಾಮುನಿಮೈದಂ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.
ತಹಬಿಲ್ದಾರ್ ತನ್ನ ಮನೆಯಲ್ಲಿ ಬಾಡಿಗೆದಾರನಾಗಿ ಉಳಿದುಕೊಂಡಿದ್ದ ಇನ್ನೊಬ್ಬ ಬಿಜೆಪಿ ನಾಯಕನೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದರು. ಅವರ ಕೆಲವು ಚಿತ್ರಗಳು ಇತ್ತೀಚೆಗೆ ಆನ್‌ಲೈನ್‌ನಲ್ಲಿ ಲೀಕ್ ಆಗಿದ್ದವು ಎಂದು ವರದಿಯಾಗಿದೆ.
ಪೊಲೀಸರು ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಇದನ್ನು ಅಸಹಜ ಸಾವು ಎಂದು ಪರಿಗಣಿಸಲಾಗಿದ್ದು, ತನಿಖೆ ಮುಂದುವರೆದಿದೆ. ಆದರೆ, ಇಲ್ಲಿಯವರೆಗೆ ಮೃತರು ಇನ್ನೊಬ್ಬ ವ್ಯಕ್ತಿಯ ಜೊತೆ ಇರುವ ಆತ್ಮೀಯ ಚಿತ್ರಗಳು ಸೋರಿಕೆಯಾದ ಕುರಿತು ನಮಗೆ ಯಾವುದೇ ದೂರುಗಳು ಬಂದಿಲ್ಲ ಎಂದು ಡಿಸಿಪಿ ದೀಪಕ್ ಚೌಧರಿ ತಿಳಿಸಿದ್ದಾರೆ.
ತಹಬಿಲ್ದಾರ್ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಗುವಾಹಟಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ವರದಿಯಿಂದ ತಿಳಿದುಬಂದಿದೆ.