ವಿವೇಕ ವಾರ್ತೆ : ಯುವತಿಯ ಜೊತೆ ಪೊಲೀಸ್ ಕಾನ್ಸ್ಟೆಬಲ್ ಒಬ್ಬರು ಅರಣ್ಯ ಪ್ರದೇಶದಲ್ಲಿ ಕ್ಯಾಮೆರಾ ಕಣ್ಣಿಗೆ ಸಿಕ್ಕಿಬಿದ್ದಿರುವ ಘಟನೆ ತಮಿಳುನಾಡಿನ ತೂತುಕುಡಿಯಲ್ಲಿ ನಡೆದಿದೆ.
ಘಟನೆಯ ಬಗ್ಗೆ ವಿಡಿಯೋವೊಂದು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದೆ. ವಿಡಿಯೋದಲ್ಲಿರುವ ಕಾನ್ಸ್ಟೆಬಲ್ ರಾಜೇಂದ್ರನ್ ಎಂದು ವರದಿಯಾಗಿದ್ದು, ವಿಲತ್ತಿಕುಲಂ ಪೊಲೀಸ್ ಉಪ ಅಧೀಕ್ಷಕರ ಕಚೇರಿಯಲ್ಲಿ ನಿಯೋಜನೆಗೊಂಡಿದ್ದಾರೆ.
ಇವರು ಯುವತಿಯೊಬ್ಬಳ ಜೊತೆ ಅರಣ್ಯದೊಳಗೆ ಹೋಗುತ್ತಿರುವ ದೃಶ್ಯ ವಿಡಿಯೋದಲ್ಲಿದೆ. ಅಲ್ಲದೆ, ವಿಡಿಯೋ ಮಾಡಿದ ವ್ಯಕ್ತಿ ಮೇಲೆ ಪೇದೆ ಹಲ್ಲೆ ಮಾಡಿರುವುದು ಸಹ ವಿಡಿಯೋದಲ್ಲಿದೆ. ಇದು ಸಾರ್ವಜನಿಕರಲ್ಲಿ ಮತ್ತು ಪೊಲೀಸ್ ಇಲಾಖೆಯೊಳಗೆ ವ್ಯಾಪಕವಾದ ಊಹಾಪೋಹ ಮತ್ತು ಕಳವಳಕ್ಕೆ ಕಾರಣವಾಗಿದೆ.
ಪೇದೆ ರಾಜೇಂದ್ರನ್, ತೂತುಕುಡಿ ಜಿಲ್ಲೆಯ ವಿಲತ್ತಿಕುಲಂ ಬಳಿಯ ಕೆ. ಸುಂದರೇಶ್ವರಪುರಂ ಗ್ರಾಮದ ನಿವಾಸಿ. 2009ರಲ್ಲಿ ಪೊಲೀಸ್ ಸೇವೆಗೆ ಸೇರಿದರು. ಇದೀಗ ಅವರ ವಿಡಿಯೋ ಫೇಸ್ಬುಕ್, ವಾಟ್ಸ್ಆಯಪ್ನಂತಹ ಸಾಮಾಜಿಕ ಜಾಲತಾಣದಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿದೆ.
ವಿಡಿಯೋದಲ್ಲಿ ಪೇದೆ ರಾಜೇಂದ್ರನ್ ಟೀ-ಶರ್ಟ್ ಮತ್ತು ಲುಂಗಿ ಧರಿಸಿದ್ದಾರೆ. ಜೊತೆಗಿರುವ ಯುವತಿ ಚೂಡಿದಾರ್ ಧರಿಸಿದ್ದು, ಮುಖ ಕಾಣದಂತೆ ದುಪ್ಪಟ್ಟದಿಂದ ಮುಚ್ಚಿಕೊಂಡಿದ್ದಾರೆ. ಯಾರೋ ನಮ್ಮ ವಿಡಿಯೋ ರೆಕಾರ್ಡ್ ಮಾಡುತ್ತಿದ್ದಾರೆ ಎಂದು ಗೊತ್ತಾದ ಬಳಿಕ ಇಬ್ಬರು ಭಯಭೀತರಾಗಿರುವಂತೆ ಕಾಣುತ್ತದೆ. ಅಲ್ಲದೆ, ಪೇದೆ ರಾಜೇಂದ್ರನ್ ವಿಡಿಯೋ ರೆಕಾರ್ಡ್ ಮಾಡುತ್ತಿದ್ದ ವ್ಯಕ್ತಿಯ ಮೇಲೆ ಹಲ್ಲೆ ಮಾಡಿರುವ ದೃಶ್ಯ ರೆಕಾರ್ಡ್ ಆಗಿದೆ.
ವಿಡಿಯೋ ವೈರಲ್ ಆದ ಬಳಿಕ ಪೊಲೀಸ್ ಇಲಾಖೆಯಲ್ಲಿನ ಸುರಕ್ಷತಾ ಮತ್ತು ನೈತಿಕ ಮಾನದಂಡಗಳ ಬಗ್ಗೆ ಚರ್ಚೆಗಳನ್ನು ಹುಟ್ಟುಹಾಕಿದೆ. ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಆಗ್ರಹಿಸಿ ಕಾನ್ಸ್ಟೆಬಲ್ ನಡೆಯ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾರ್ವಜನಿಕ ವಲಯದಲ್ಲಿ ತೀರ್ವ ಚರ್ಚೆಯಾಗುತ್ತಿರುವ ಬೆನ್ನಲ್ಲೇ ಪರಿಸ್ಥಿತಿಯ ಗಂಭೀರತೆಯನ್ನು ಅರಿತುಕೊಂಡ ಪೊಲೀಸ್ ಇಲಾಖೆಯು, ರಾಜೇಂದ್ರನ್ ವಿರುದ್ಧ ಕ್ರಮ ತೆಗೆದುಕೊಳ್ಳಲು ಮುಂದಾಗಿದೆ. ಈ ವಿಷಯದ ಬಗ್ಗೆ ರಾಜೇಂದ್ರನ್ ಮತ್ತು ವಿಡಿಯೋದಲ್ಲಿರುವ ಯುವತಿ ಇಬ್ಬರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದೆ. ಸದ್ಯ ತನಿಖೆ ನಡೆಯುತ್ತಿದೆ. (ಏಜೆನ್ಸೀಸ್)