ವಿವೇಕ ವಾರ್ತೆ : ಅನೈತಿಕ ಸಂಬಂಧ ಹೊಂದಿದ್ದ ಆರೋಪದ ಮೇಲೆ ಜೋಡಿಯೊಂದನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿ ಗ್ರಾಮಸ್ಥರು ಥಳಿಸಿರುವ ಘಟನೆ ದಕ್ಷಿಣ ತ್ರಿಪುರಾ ಜಿಲ್ಲೆಯ ಬೆಲೋನಿಯಾ ಪಟ್ಟಣದಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಮದುವೆಯಾಗಿ ಈಗಾಗಲೇ ಎರಡು ಮಕ್ಕಳಿರುವ ವ್ಯಕ್ತಿ, ಅದೇ ಗ್ರಾಮದಲ್ಲಿ ತನ್ನ ಸೋದರ ಸಂಬಂಧಿಯೊಂದಿಗೆ ನೆಲೆಸಿದ್ದ ಯುವತಿಯೊಂದಿಗೆ ಅಕ್ರಮ ಸಂಬಂಧವನ್ನು ಇಟ್ಟುಕೊಂಡಿದ್ದ. ವಿವಾಹಿತ ವ್ಯಕ್ತಿ ಹಾಗೂ ಯುವತಿ ಜೊತೆಯಾಗಿ ಇರುವುದನ್ನು ಗ್ರಾಮಸ್ಥರು ನೋಡಿದ್ದಾರೆ. ಬಳಿಕ ಇಬ್ಬರನ್ನು ಹೊರಗೆ ಎಳೆದುಕೊಂಡು ಬಂದಿದ್ದಾರೆ.
ನಂತರ ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿ ಇಬ್ಬರನ್ನು ಥಳಿಸಿದ್ದಾರೆ. ಓರ್ವ ಮಹಿಳೆ ಯುವತಿಯ ಕೂದಲನ್ನು ಹಿಡಿದು ಹಲ್ಲೆ ನಡೆಸಿದ್ದಾರೆ. ಇಬ್ಬರನ್ನು ಥಳಿಸಿದರೂ ಅಕ್ಕಪಕ್ಕದಲ್ಲಿದ್ದ ಜನರು ಯಾರೂ ಸಹ ಅವರ ಸಹಾಯಕ್ಕೆ ಬರಲಿಲ್ಲ.
ಇದಾದ ಬಳಿಕ ಪೊಲೀಸರು ಘಟನಾ ಸ್ಥಳಕ್ಕೆ ಬಂದು, ಕಂಬಕ್ಕೆ ಕಟ್ಟಿದವರನ್ನು ಬಿಡುಗಡೆ ಮಾಡಿದ್ದಾರೆ. ಎರಡೂ ಪಾರ್ಟಿ ಕಡೆಯವರು ಈ ಬಗ್ಗೆ ಯಾವ ದೂರನ್ನು ನೀಡಿಲ್ಲ. ಥಳಿತಕ್ಕೆ ಒಳಗಾದವರು ಕೂಡ ದೂರನ್ನು ನೀಡಿಲ್ಲ. ಪೊಲೀಸರು ಸ್ವತಃ ಕೇಸ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಯುವತಿಯ ಸೋದರ ಸಂಬಂದಿ ಹಾಗೂ ದೈಹಿಕ ಹಲ್ಲೆಗೈದ ಅತ್ತಿಗೆಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ವರದಿಯಿಂದ ತಿಳಿದುಬಂದಿದೆ.