ವಿವೇಕ ವಾರ್ತೆ : ಚಿಕ್ಕಮಗಳೂರು ಜಿಲ್ಲೆಯ ಕಡೂರು ಮಾಜಿ ತಹಶೀಲ್ದಾರ್ ನ್ನು ಸರಕಾರಿ ಬೀಳು ಭೂಮಿಯನ್ನೇ ಖಾಸಗಿ ವ್ಯಕ್ತಿಗಳಿಗೆ ಅಕ್ರಮವಾಗಿ ಖಾತೆ ಮಾಡಿಕೊಟ್ಟಿರುವ ಆರೋಪದ ಮೇಲೆ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಮಾಜಿ ತಹಶೀಲ್ದಾರ್ ಜೆ.ಉಮೇಶ್ ಎಂಬುವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಇವರ ಮೇಲೆ ಕಡೂರು ತಾಲೂಕಿನ ಬೀರೂರು ಹೋಬಳಿಯ ಉಳಿನಾಗರು ಗ್ರಾಮದ ಸರ್ವೆ ನಂ. 43ರಲ್ಲಿ 5.04 ಎಕರೆ ಸರಕಾರಿ ಬೀಳು ಭೂಮಿಯನ್ನು ಖಾಸಗಿ ವ್ಯಕ್ತಿಗಳಿಗೆ ಅಕ್ರಮವಾಗಿ ಖಾತೆ ಮಾಡಿಕೊಟ್ಟಿರುವ ಆರೋಪವಿದೆ.
ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಸೂಚನೆ ಮೇರೆಗೆ ತರೀಕೆರೆ ಉಪವಿಭಾಗಾಧಿಕಾರಿ ಡಾ.ಕೆ.ಜೆ. ಕಾಂತರಾಜ್ ಅವರು ಕರ್ನಾಟಕ ಭೂ ಕಂದಾಯ ಕಾಯ್ದೆಯಡಿ ತಹಶೀಲ್ದಾರ್ ಜೆ.ಉಮೇಶ್ ಹಾಗೂ ಇಬ್ಬರು ಕಂದಾಯಾಧಿಕಾರಿಗಳ ವಿರುದ್ಧ ದೂರು ನೀಡಿದ್ದರು. ಇದೀಗ ಈ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಉಮೇಶ್ ನನ್ನು ಬೆಂಗಳೂರಿನಲ್ಲಿ ಕಡೂರು ಪೊಲೀಸರಿಂದ ಬಂಧಿಸಿದ್ದಾರೆ.
ಕಿರಿಯ ಶ್ರೇಣಿ ಕೆಎಎಸ್ ಆಧಿಕಾರಿ ಆಗಿರುವ ಜೆ.ಉಮೇಶ್, ಸದ್ಯ ಕಾರವಾರದಲ್ಲಿ ಸೀಬರ್ಡ್ ನೌಕಾನೆಲೆಯ ಭೂಸ್ವಾಧೀನಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು ಎಂದು ತಿಳಿದುಬಂದಿದೆ.