ವಿವೇಕವಾರ್ತೆ- ರಸ್ತೆಯಲ್ಲಿ ಹೋಗುತ್ತಿದ್ದ ಆಂಬುಲೆನ್ಸ್ನಲ್ಲಿ ಬರೋಬ್ಬರಿ 25.80 ಕೋಟಿ ರೂಪಾಯಿ ನಕಲಿ ನೋಟುಗಳು ಪತ್ತೆಯಾಗಿದ್ದು, ಪೊಲೀಸರೇ ಶಾಕ್ ಆಗಿದ್ದಾರೆ. ಸಾವು-ಬದುಕಿನ ನಡುವೆ ಹೋರಾಡುತ್ತಿರುವ ರೋಗಿಗಳನ್ನು ಆಸ್ಪತ್ರೆಗೆ ಕರೆದೊಯ್ದು ಜೀವ ಉಳಿಸುವ ಮಹತ್ತರ ಕಾರ್ಯಕ್ಕೆಂದು ಇರುವ ಆಪದ್ಬಾಂಧವ ಆಂಬುಲೆನ್ಸ್ ಅನ್ನು ವಂಚಕರು ನಕಲಿ ನೋಟು ರವಾನೆ ಬಳಸಿಕೊಂಡಿದ್ದಾರೆ.
ನಕಲಿ ನೋಟುಗಳನ್ನು ರವಾನಿಸುವಾಗ ಪೊಲೀಸರಿಗೆ ಅನುಮಾನ ಬಾರದಂತೆ ನೋಡಿಕೊಳ್ಳಲು ಆಂಬುಲೆನ್ಸ್ ಬಳಸಿದ್ದಾರೆ.
ಎಲ್ಲವೂ 2 ಸಾವಿರ ರೂಪಾಯಿ ಮುಖಬೆಲೆಯ ನಕಲಿ ನೋಟುಗಳಾಗಿದ್ದು, 6 ಪೆಟ್ಟಿಗೆಯಲ್ಲಿ ಒಟ್ಟು 1290 ನೋಟಿನ ಕಂತೆಗಳು ಸಿಕ್ಕಿವೆ. ಈ ಪ್ರಕರಣ ಗುಜರಾತ್ ರಾಜ್ಯದಲ್ಲಿ ಬೆಳಕಿಗೆ ಬಂದಿದೆ.
ಅಹಮದಾಬಾದ್-ಮುಂಬೈ ರಸ್ತೆಯಲ್ಲಿ ಗುರುವಾರ ರಾತ್ರಿ ಖಚಿತ ಮಾಹಿತಿ ಮೇರೆಗೆ ಆಂಬುಲೆನ್ಸ್ ಅನ್ನು ತಡೆದ ಕಾಮ್ರೇಜ್ ಠಾಣೆ ಪೊಲೀಸರು ತಪಾಸಣೆ ಮಾಡಿದರು. ಅ ವೇಳೆ ಆಂಬುಲೆನ್ಸ್ ಒಳಗೆ ನಕಲಿ ನೋಟು ಪತ್ತೆಯಾಗಿವೆ. ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಎಸ್ಪಿ ಹಿತೇಶ್ ಜೋಯ್ಸರ್ ಪ್ರತಿಕ್ರಿಯಿಸಿದ್ದಾರೆ.